ಕೋಕೇನ್ ಗಿಡ

ಕೋಕೇನ್ ಎಂಬ ಆಲ್ಕಲಾಯಿಡನ್ನು ಕೊಡುವ ಒಂದು ಸಸ್ಯ ಪ್ರಭೇದ. ಎರಿತ್ರೋeóÉೈಲೇಸೀ ಕುಟುಂಬಕ್ಕೆ ಸೇರಿದೆ. ಎರಿತ್ರೋeóÉೈಲಮ್ ಕೋಕ ಇದರ ಶಾಸ್ತ್ರೀಯ ಹೆಸರು. ದಕ್ಷಿಣ ಅಮೆರಿಕದ ಪೆರು ಮತ್ತು ಬೊಲೀವಿಯಗಳ ಮೂಲವಾಸಿಯಾದ ಇದು ಅಮೆರಿಕದ ಉಷ್ಣವಲಯಗಳಲ್ಲೆಲ್ಲ ಬಹಳ ಸಾಮಾನ್ಯವಾಗಿ ಬೆಳೆಯುತ್ತದೆ. ಜಾವ ಮತ್ತು ಇಂಡೊನೇಷ್ಯಗಳಲ್ಲೂ ದಕ್ಷಿಣ ಅಮೆರಿಕದ ಅಂಡೀಸ್ ಪರ್ವತ ಪ್ರದೇಶಗಳಲ್ಲೂ ಇದನ್ನು ಬೆಳೆಸಲಾಗುತ್ತಿದೆ. ಕಳೆದ ಶತಮಾನದ ಕೊನೆಯಲ್ಲಿ ಭಾರತದ ತಮಿಳುನಾಡು, ಮಹಾರಾಷ್ಟ್ರ, ಮೈಸೂರು, ಬಂಗಾಳ, ಅಸ್ಸಾಂ ಮುಂತಾದೆಡೆಗಳಲ್ಲಿ ಇದನ್ನು ಬೆಳೆÀಸಲು ಪ್ರಯತ್ನಿಸಲಾಯಿತು. ಆದರೆ ಭಾರತದ ಹವೆಗೆ ಇದು ಒಗ್ಗಿಕೊಳ್ಳಲಿಲ್ಲವಾಗಿ ಬೆಳೆಸುವ ಪ್ರಯತ್ನ ವಿಫಲವಾಯಿತು. ಈಗ ಅಪರೂಪವಾಗಿ ತೋಟಗಳಲ್ಲಿ ಅಲಂಕಾರ ಸಸ್ಯವಾಗಿ ಬೆಳೆಸಲಾಗುತ್ತದೆ.

ಕೋಕೇನ್ ಗಿಡ ಸುಮಾರು 18' ಎತ್ತರಕ್ಕೆ ಬೆಳೆಯುವ ಮರ. ಆದರೆ ಸಾಮಾನ್ಯವಾಗಿ ಎಲೆಗಳನ್ನು ಕೀಳಲು ಅನುಕೂಲವಾಗಲೆಂದು 9' ಎತ್ತರಕ್ಕೆ ಮೀರಿ ಬೆಳೆಯಗೊಡುವುದಿಲ್ಲ. ಎಲೆಗಳ ಬಣ್ಣ ಹಚ್ಚಹಸಿರು; ಆಕಾರ ಅಂಡದಂತೆ. ಎಲೆಗಳಲ್ಲ್ಲಿ ಕೋಕೇನ್ ಆಲ್ಕಲಾಯಿಡ್ ಇರುವುದರಿಂದ ಇವು ಕಹಿಯಾಗಿರುತ್ತವೆ. ಹೂಗಳು  ಗಾತ್ರದಲ್ಲಿ ಚಿಕ್ಕವು; ಬಣ್ಣ ಹಳದಿ, ಪುಷ್ಪಪತ್ರಗಳು 5; ದಳಗಳು 5, ಕೇಸರಗಳು 10, ಅಂಡಾಶಯ ಉಚ್ಚಸ್ಥಾನದ್ದು, 3 ಕಾರ್ಪೆಲ್‍ಗಳಿವೆ. ಫಲ ಒಂದೇ ಬೀಜವುಳ್ಳ ಅಷ್ಟಿಫಲ ಮಾದರಿಯದು.

ಕೋಕೇನ್ ಗಿಡದ ಬೇಸಾಯಕ್ಕೆ 70"-80" ಮಳೆ ಬೀಳುವ ಮತ್ತು 550-700 ಫ್ಯಾ. ಉಷ್ಣತೆ ಇರುವ ಪ್ರದೇಶ ಅತ್ಯಾವಶ್ಯಕ. ಕೋಕೇನ್‍ಗಿಡ ಸಮುದ್ರ ಮಟ್ಟದ ಪ್ರದೇಶಗಳಲ್ಲಿ ಬೆಳೆಯ ಬಲ್ಲುದಾದರೂ ಕೋಕೇನ್ ಆಲ್ಕಲಾಯಿಡಿನ ಪರಿಮಾಣದ ದೃಷ್ಟಿಯಿಂದ ಬೆಟ್ಟದ ಇಳಿಜಾರು ಪ್ರದೇಶಗಳÀಲ್ಲಿ ಬೆಳೆಸುವುದೇ ಉತ್ತಮ. ಗಿಡವನ್ನು ಬೆಳೆಸಿದ ಎರಡು ಅಥವಾ ಮೂರು ವರ್ಷಗಳ ಅನಂತರ ಹದವಾಗಿ ಬಲಿತ ಎಲೆಗಳನ್ನು ಕಿತ್ತು ಬಿಸಿಲಿನಲ್ಲಿ ಒಣಗಿಸಿ ಅವುಗಳಿಂದ ಕೋಕೇನನ್ನು ಹೊರ ತೆಗೆಯಲಾಗುತ್ತದೆ. ಎಲೆಗಳಲ್ಲಿ ಟ್ರೋಪಕೋಕೇನ್, ಸಿನಮೈಲ್, ಕೋಕೇನ್, ಟ್ರಕ್ಸಿಲಿನ್ ಮುಂತಾದ ಆಲ್ಕಲಾಯಿಡು ಇವೆಯಾದರೂ ಇವುಗಳಲ್ಲಿ ಕೋಕೇನ್ ಪರಿಮಾಣವೇ ಹೆಚ್ಚು. ಇದರ ಪರಿಮಾಣ 0.5%-1.5% ಎಂದು ಅಂದಾಜು ಮಾಡಲಾಗಿದೆ. ಕೋಕೇನ್ ಗಿಡದ ತೊಗಟೆ ಮತ್ತು ಬೀಜಗಳಲ್ಲೂ ಕೋಕೇನ್ ಇದೆ. ವರ್ಷಕ್ಕೆ 3-4 ಸಲ ಎಲೆಗಳನ್ನು ಕೊಯ್ಯಬಹುದು. ವಾರ್ಷಿಕ ಇಳುವರಿ ಎಕರೆಗೆ 750-1000 ಕೆಜಿಯಷ್ಟು.
ಕೋಕೇನ್‍ಗಿಡ ಕೋಕೇನ್‍ಗಾಗಿ ಮಾತ್ರ ಹೆಚ್ಚು ಪ್ರಸಿದ್ಧವಾಗಿದ್ದರೂ ಇದಕ್ಕೆ ಬೇರೆ ಔಷಧೀಯ ಗುಣಗಳೂ ಇಲ್ಲದಿಲ್ಲ. ಕಜ್ಜಿ, ದದ್ದು, ತಲೆನೋವು, ವಾತಶೂಲ ಮುಂತಾದವನ್ನು ನಿವಾರಿಸಲು ಕೋಕೇನ್ ಮುಲಾಮನ್ನು ಬಳಸುವುದಿದೆ.   (ಎಚ್.ಎಸ್.ಎಸ್.ಕೆ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ